ಚಿತ್ರಾಂಗದ -
ಶಂತನು ಮತ್ತು ಸತ್ಯವತಿಯರ ಹಿರಿಯ ಮಗ. ಭೀಷ್ಮನ ಬಲತಮ್ಮ, ವಿಚಿತ್ರವೀರ್ಯನ ಅಣ್ಣ. ಈತ ಬಾಲ್ಯದಿಂದಲೂ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದ. ತಂದೆಯ ಮರಣಾನಂತರ ಸತ್ಯವತಿಯ ವಿವಾಹದ ಮುಂಚಿನ ಕರಾರಿನಂತೆ ಭೀಷ್ಮ ಈತನಿಗೇ ಪಟ್ಟಾಭಿಷೇಕ ಮಾಡಿದ. ಈತ ಅತ್ಯಂತ ಪ್ರಬಲನಾಗಿ, ಪರಾಕ್ರಮದಿಂದ ರಾಜ್ಯವಾಳುತ್ತಿದ್ದ. ದೇವಮಾನವ ಮತ್ತು ರಾಕ್ಷಸರಲ್ಲಿ ತನಗೆ ಸರಿಸಮನಾಗಿ ಯಾರೂ ಇಲ್ಲ ಎಂಬ ದರ್ಪ ಇವನಲ್ಲಿ ಮನೆಮಾಡಿತ್ತು. ಶತ್ರು ಭಯಂಕರನಾಗಿದ್ದ ಈತನ ವ್ಯಾಪ್ತಿಯನ್ನು ಸಹಿಸದ ಚಿತ್ರಾಂಗದನೆಂಬ ಗಂಧರ್ವ ಹಸ್ತಿನಾಪುರದ ಮೇಲೆ ದಾಳಿ ಮಾಡಿದ. ಮಿತಿಮೀರಿದ ಆತ್ಮವಿಶ್ವಾಸದಿಂದ ಚಿತ್ರಾಂಗದ ಆತನನ್ನು ಎದುರಿಸಿದ. ಕುರುಸೇನೆಗೂ, ಗಂಧರ್ವರಿಗೂ ಸುಮಾರು ಮೂರು ವರ್ಷಗಳ ಕಾಲ ಯುದ್ಧ ನಡೆಯಿತು. ಎರಡು ಪಕ್ಷದವರೂ ಸಮಬಲದಿಂದ ಹೋರಾಡಿದರು. ಚಿತ್ರಾಂಗದ ಪರಾಕ್ರಮಶಾಲಿಯಾಗಿದ್ದರೂ ಗಂಧರ್ವರ ಮಾಯಾ ಪ್ರಕ್ರಿಯೆಗಳನ್ನು ತಿಳಿದಿರಲಿಲ್ಲ. ಆದ್ದರಿಂದ ಪ್ರಾರಂಭದಲ್ಲಿ ಗೆದ್ದರೂ ಕೊನೆಯಲ್ಲಿ ಸೋತು ಗಂಧರ್ವನಿಂದ ಹತನಾದ. ಗೆದ್ದ ಗಂಧರ್ವನಾದರೋ ಭೀಷ್ಮನಿಗೆ ಹೆದರಿ ತನ್ನ ಲೋಕಕ್ಕೆ ಓಡಿದ. ಆನಂತರ ವಿಚಿತ್ರವೀರ್ಯನಿಗೆ ಪಟ್ಟಾಭಿಷೇಕವಾಯಿತು.

ಮಂಗರಸನ ನೇಮಿಜಿನೇಶಸಂಗತಿ ಮತ್ತು ಕರ್ಣಪಾರ್ಯನ ನೇಮಿನಾಥ ಪುರಾಣಗಳಲ್ಲಿ ಚಿತ್ರಾಂಗದ ಬೇರೆ ರಾಜರೊಂದಿಗೆ ಯುದ್ಧಮಾಡಿ ಮಡಿದ ಎಂದಿದೆ. ಹರಿಷೇಣನ ಬೃಹತ್ ಕಥೆಯಲ್ಲಿ ಚಿತ್ರ, ವಿಚಿತ್ರ, ಚಿತ್ರಾಂಗದ ಈ ಮೂವರೂ ಶಂತನು ಸತ್ಯವತಿಯರ ಮಕ್ಕಳು ಎಂದಿದೆ.							(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ